ಟರ್ಬೋ ಜೆಟ್ -
	ತಿರುಬಾನಿಯ ಬಳಕೆಯಿಂದ ಉತ್ಪಾದಿತವಾದ ಅನಿಲದ ಅಥವಾ ದ್ರವದ ಧಾರೆಗೂ (ಜೆಟ್) ಇದರ ಉತ್ಪಾದಕ ಯಂತ್ರಕ್ಕೂ ಇರುವ ಹೆಸರು. ಟರ್ಬೋಜೆಟ್‍ಗಳ ಉಪಯೋಗ ವಿಶೇಷವಾಗಿ ಹೆಚ್ಚು ರಭಸದಿಂದ ಚಲಿಸುವ ವಿಮಾನಗಳಲ್ಲಿ ಇದೆ. ವಾತಾವರಣದಲ್ಲಿರುವ ವಾಯುವನ್ನು ಧಾರಾರೂಪದಲ್ಲಿ ವಿಮಾನ ಚಲನೆಯ ವಿರುದ್ಧ ದಿಶೆಯಲ್ಲಿ ತಳ್ಳುವುದರಿಂದ ಅದರ ಪ್ರತಿಕ್ರಿಯೆಯಾಗಿ ಜೆಟ್‍ಯಂತ್ರ ಹಾಗೂ ಅದನ್ನು ಹೊತ್ತಿರುವ ವಿಮಾನದ ಮೇಲೆ ಅದೇ ಗಾತ್ರದ ಬಲಪ್ರಯೋಗ ಉಂಟಾಗಿ ವಿಮಾನ ಚಲಿಸುತ್ತದೆ. ವಾಯುವನ್ನು ಸಂಪೀಡಕವೊಂದರ (ಕಂಪ್ರೆಸರ್) ಸಹಾಯದಿಂದ ಹೆಚ್ಚು ಒತ್ತಡಕ್ಕೆ ಗುರಿಮಾಡಿ ಇಂಧನಜ್ವಲನೆಯಿಂದ ಇದರ ಉಷ್ಣತೆಯನ್ನು ಹೆಚ್ಚಿಸಿ, ಎಂಜಿನ್ನಿನ ಹಿಂಭಾಗದಲ್ಲಿ ಈ ವಾಯುಧಾರೆಯನ್ನು ಹೊರತಳ್ಳುವುದರ ಮೂಲಕ ಜೆಟ್‍ನ ಕಾರ್ಯ ನಡೆಯುತ್ತದೆ.

	ಟರ್ಬೋ ಜೆಟ್ಟು ಅನಿಲ ಅಥವಾ ಇಂಧನ ತಿರುಬಾನಿಯನ್ನು ಉಪಯೋಗಿಸಿ ಕೆಲಸಮಾಡುವ ಒಂದು ಅಂತರ್ದಹನ ಯಂತ್ರ. ಇದರ ಮುಖ್ಯ ಭಾಗಗಳು ಐದು: 1 ವಾಯುವನ್ನು ಒಳಕ್ಕೆ ತೆಗೆದುಕೊಳ್ಳುವ ಪ್ರವೇಶಕ ವಿಸಾರಕ (ಇನ್‍ಲೆಟ್ ಡಿಫ್ಯೂಸರ್); 2 ಟರ್ಬೋ ಸಂಪೀಡಕ; 3 ದಹನ ಕೋಷ್ಠಗಳು (ಕಂಬಶ್ಚನ್ ಚೇಂಬರ್ಸ್); 4 ತಿರುಬಾನಿ; 5 ವಾಯುವನ್ನು ಹೊರಬಿಡುದ ಕೊಳವೆ ಅಥವಾ ನಿರ್ಗಮನ ಮೂತಿ.

	ಜೆಟ್‍ನ ಮುಂದಿರುವ ವಾಯುವು ವಿಸಾರಕದ ಮೂಲಕ ಸಂಪೀಡಕವನ್ನು ಸೇರುತ್ತದೆ. ಇಲ್ಲಿ ಅದರ ವೇಗವನ್ನು ಕುಗ್ಗಿಸಿ ಒತ್ತಡವನ್ನು ಹೆಚ್ಚಿಸಿ ದಹನ ಕೋಷ್ಠಗಳಿಗೆ ಕಳುಹಿಸಲಾಗುತ್ತದೆ. ಕೋಷ್ಠದಲ್ಲಿ ವಿಮಾನೇಂದನವನ್ನು (ಗ್ಯಾಸೊಲೀನ್ ಮತ್ತು ಕೆರೊಸೀನಿನ ನಿರ್ದಿಷ್ಟ ಮಿಶ್ರಣ) ವಿಸಾರಕವೊಂದರ ಮೂಲಕ ಒಳಬಿಟ್ಟು ಜ್ವಲಿಸಲಾಗುತ್ತದೆ. ವಾಯುವಿನ ಉಷ್ಣತೆ ಈ ಜ್ವಲನೆಯಿಂದ ಏರಿ ಅದು ಕ್ಷಿಪ್ರವಿಕಾಸಗೊಳ್ಳುತ್ತದೆ. ಈ ವಾಯು ಮತ್ತು ದಹನಾನಿಲಗಳು ತಿರುಬಾನಿ ಒಂದರ ಮೂಲಕ ಹಾದುಹೋಗಿ ಅದರ ಚಕ್ರವನ್ನು ತಿರುಗಿಸುತ್ತವೆ. ತಿರುಬಾನಿಯು ಸಂಪೀಡಕವನ್ನು ಚಾಲಿಸುತ್ತದೆ. ಅನಂತರ ಜ್ವಲಿತಾನಿಲಗಳು ಮತ್ತು ಹೆಚ್ಚು ಒತ್ತಡದ ಹಾಗೂ ಉಷ್ಣತೆಯ ವಾಯುವು ನಿರ್ಗಮನ ಮೂತಿಯ ಮೂಲಕ ಅತಿ ಹೆಚ್ಚು ರಭಸದಿಂದ ಜೆಟ್ ರೂಪದಲ್ಲಿ ಹೊರಬೀಳುತ್ತವೆ. ಈ ವೇಗದ ಅನಿಲಗಳ ಪ್ರತಿಕ್ರಿಯೆಯಾಗಿ ಟರ್ಬೋಜೆಟ್ ಮುಂದೂಡಲ್ಪಡುತ್ತದೆ. ವಿಮಾನವು ರಭಸದಿಂದ ಚಲಿಸುತ್ತಿರುವಾಗ ಅದಕ್ಕೆ ಸಂಬಂಧಿಸಿದಂತೆ ವಾಯು ವಿರುದ್ಧ ದಿಶೆಯಲ್ಲಿ ಅಷ್ಟೇ ವೇಗದಲ್ಲಿ ಚಲಿಸುತ್ತಿರುತ್ತದೆ. ಇದು ಅನಗತ್ಯ ಚಲನೆ. ಈ ವೇಗವನ್ನು ಕಡಿಮೆ ಮಾಡಿ ವೇಗಶಕ್ತಿಯನ್ನು ವಾಯುವಿನ ಒತ್ತಡ ಹೆಚ್ಚಿಸುವಂತೆ ಮಾಡಲು ಸಾಧ್ಯ. ಈ ಕಾರ್ಯ ಪ್ರವೇಶಿಕ ವಿಸಾರಕದ್ದು. ಇದರಲ್ಲಿ ಚರಭಾಗ ಒಂದೂ ಇರುವುದಿಲ್ಲ. ಇದೊಂದು ವಿಶೇಷ ಆಕಾರದ ಕೊಳವೆ. ವಿಸಾರಕದಿಂದ ಒಳಬಂದ ವಾಯುವನ್ನು ಸಂಪೀಡಿಸಿ ಅದರ ಒತ್ತಡವನ್ನು ಹೆಚ್ಚುಮಾಡವ ಸಾಧನವೇ ಸಂಪೀಡಕ. ಇದನ್ನು ಜೆಟ್‍ನಲ್ಲೇ ಅಳವಡಿಸಿರುವ ಒಂದು ತಿರುಬಾನಿ ನಡೆಸುತ್ತದೆ. ಇಲ್ಲಿ ಬಳಸುವ ಸಂಪೀಡಕಗಳು ಸಾಧಾರಣವಾಗಿ ಅಪಕೇಂದ್ರಕ ಅಥವಾ ಅಕ್ಷಪ್ರವಾಹೀ ಸಂಪೀಡಕಗಳು. ಇವುಗಳಲ್ಲಿ ವಾಯುವಿನ ಒತ್ತಡ ಏರಿಕೆಯ ಪ್ರಮಾಣಗಳು ಒಂದರಿಂದ ಹತ್ತರವರೆಗೂ ಇರುತ್ತವೆ. ಇನ್ನೂ ಹೆಚ್ಚಿನ ಸಂಪೀಡನೆ ಬೇಕಾದಾಗ ದ್ವಿಚಕ್ರ ಸಂಪೀಡಕಗಳನ್ನು ಬಳಸುತ್ತಾರೆ. 

	ಜೆಟ್‍ಗಳಲ್ಲಿ ಹಲವಾರು ದಹನಕೋಷ್ಠಗಳಿರುವುವು. ಇವುಗಳಲ್ಲಿ ವಾಯುವನ್ನು ಇಂಧನದ ಸಹಾಯದಿಂದ ಉರಿಸಿ ಅದರ ಉಷ್ಣತೆಯನ್ನು ಏರಿಸಲಾಗುತ್ತದೆ. ಸಂಪೀಡಕದಿಂದ ಬಂದ ವಾಯುವನ್ನು ಒಳಕ್ಕೆಬಿಡಲು ಹಾಗೂ ಇಂಧನವನ್ನು ಒಳಕ್ಕೆ ಸೆಳೆಯಲು ತಕ್ಕ ವ್ಯವಸ್ಥೆ ಉಂಟು. ಒಟ್ಟಿನಲ್ಲಿ ಸಂಪೀಡಕದಲ್ಲಿ ಒತ್ತಡ ಹೆಚ್ಚಿಸುವ ಮೂಲಕ ಹಾಗೂ ಕೋಷ್ಠದಲ್ಲಾಗುವ ಜ್ವಲನೆಯ ಮೂಲಕ ಎರಡು ಘಟ್ಟದಲ್ಲಿ ವಾಯುಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಈ ಅಧಿಕಶಕ್ತಿಯ ವಾಯು ಹಾಗೂ ದಹನಾನಿಲಗಳು ತಿರುಬಾನಿಯ ಚಕ್ರದ ಅಲಗುಗಳ ಮೇಲೆ ಹರಿದು ಹೋಗುತ್ತವೆ. ಸಂಪೀಡಕವನ್ನು ಚಾಲಿಸುವುದು ತಿರುಬಾನಿಯ ಕೆಲಸ. ಇದಕ್ಕೆ ಸಾಕಾದಷ್ಟು ಶಕ್ತಿಯನ್ನು ಮಾತ್ರ ಅದು ವಾಯು ಮತ್ತು ದಹನಾನಿಲಗಳಿಂದ ಪಡೆಯುತ್ತದೆ. ಸಂಪೀಡಕ ಹಾಗೂ ತಿರುಬಾನಿಗಳೆರಡನ್ನೂ ಒಂದೇ ಅಕ್ಷದಂಡದ ಮೇಲೆ ಜೋಡಿಸಲಾಗಿದೆ. ವಾಯುವು ಅಲಗುಗಳ ಮೇಲೆ ಹಾದು ಹೋದಾಗ ಅಲಗು ಚಕ್ರ ತಿರುಗಿ ಸಂಪೀಡಕವನ್ನು ವಾಲಿಸುತ್ತದೆ. ತಿರುಬಾನಿಯಿಂದ ಬಂದ ವಿಶೇಷ ಶಕ್ತಿಯುತ ವಾಯುವಿನ ಈ ಶಕ್ತಿಯನ್ನು ವೇಗವಾಗಿ ಪರಿವರ್ತಿಸುವ ಕಾರ್ಯ ನಿರ್ಗಮನಮೂತಿಯದು. ಇದು ಸಹ ಯಾವ ಚರ ಭಾಗವೂ ಇಲ್ಲದ ವಿಶೇಷ ಆಕಾರದ ಒಂದು ಕೊಳವೆ. 

	ಟರ್ಬೋಜೆಟ್‍ಗಳಲ್ಲದೆ ವಿಮಾನಚಾಲನೆಗೆ ಇನ್ನೂ ಹಲವು ವಿಧದ ಜೆಟ್‍ಗಳನ್ನು ಅಳವಡಿಸುತ್ತಾರೆ. ಟರ್ಬೋಪ್ರಾಪ್. ಟರ್ಬೋರಾಮ್‍ಜೆಟ್ ಇವುಗಳಲ್ಲಿ ಮುಖ್ಯವಾದವು. ಇವುಗಳ ರಚನೆ ಮತ್ತು ಕ್ರಿಯೆಯ ರೀತಿಯಲ್ಲಿ ಭೇದವಿದ್ದರೂ ಹಿನ್ನೆಲೆಯ ಸಿದ್ಧಾಂತ ಒಂದೇ ಆಗಿದೆ. ಇದೇ ಸಿದ್ಧಾಂತವನ್ನು ಅನುಸರಿಸಿ ಕೆಲಸಮಾಡುವ ತನ್ನದೇ ಆದ ಆಮ್ಲಜನಕ ಪೂರೈಕೆಯ ಸಾಧನವಿರುವ ಜೆಟ್‍ಗಳನ್ನು ರಾಕೆಟ್‍ಗಳಿಗೆ ಅಳವಡಿಸುತ್ತಾರೆ. ಮೊತ್ತಮೊದಲಿಗೆ ಟರ್ಬೋಜೆಟ್‍ಯಂತ್ರವನ್ನು ತಯಾರಿಸಿದ ಖ್ಯಾತಿ ಇಂಗ್ಲೆಂಡಿಗೆ ಸಲ್ಲುತ್ತದೆ. 1930ರಲ್ಲಿ ಫ್ರಾಂಕ್‍ವ್ಹಿಟ್ಲ್ ಎಂಬ ವಿಮಾನ ಯೋಧ ಇದರ ವಿನ್ಯಾಸ ಮತ್ತು ರಚನೆಯನ್ನು ರೂಪಿಸಿದ. 

	(ನೋಡಿ- ಜೆಟ್-ಎಂಜಿನ್)
(ಎ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ